Wednesday 28 March 2012

ಪೆನ್ಸಿಲ್ಲು ಪ್ರೇಮ

ಶಾಯಿಯ ಮೇಲಿನ ಪ್ರೇಮದ ಗುರುತೆಂಬಂತೆ ಬರೆದ ಕಥೆಯೊಂದನ್ನು post ಮಾಡಿದ್ದಾಯಿತು. ಈಗ ಸೀಸ, ಅಂದರೆ ಪೆನ್ಸಿಲ್ಲು ಪ್ರೇಮದ ಗುರುತಾಗಿ ಕೆಲವು ಚಿತ್ರಗಳು. ಇವುಗಳನ್ನು ಚಿತ್ರಗಳು ಅನ್ನುವುದಕ್ಕಿಂತ 'copy works' ಎಂದು ಕರೆಯುವುದು ಸರಿಯೆನಿಸುತ್ತದೆ.


normal ಬಣ್ಣದ ಹಾಳೆಯ ಮೇಲೆ 4b ಮತ್ತು 8b ಪೆನ್ಸಿಲ್ಲಿನಿಂದ ಹೆಣ್ಣಿನ portrait. ಕೃಪೆ: ಆದಿತ್ಯ ಚಾರಿ.



ಕಪ್ಪು ಬಣ್ಣದ Canson colorline paper ಮೇಲೆ Conte white chalk ನಿಂದ ಕಾಲುಗಳ ಚಿತ್ರ. ಕೃಪೆ: Momot 



ಕಪ್ಪು ಬಣ್ಣದ Canson colorline paper ಮೇಲೆ Conte white chalk ನಿಂದ ಹೆಣ್ಣೊಬ್ಬಳ portrait. ಕೃಪೆ: ಆದಿತ್ಯ ಚಾರಿ.


ಈ ರೀತಿ ಕಪ್ಪು ಬಣ್ಣದ ಹಾಳೆಯ ಮೇಲೆ ಬಿಳೀ ಬಣ್ಣದ ಪೆನ್ಸಿಲ್ಲಿನಿಂದ ಚಿತ್ರ ಬಿಡಿಸುವ ಶೈಲಿಗೆ Negative Drawing ಎನ್ನುತ್ತಾರೆ. 

Monday 26 March 2012


                             ದೈವವೊಂದು ಬಗೆಯಿತು

           "ಒಂದು ಕಟ್ಟಿಗೆ ಮೂರ್ರುಪಾಯಿ ಅಂದರೇನು ಕಮ್ಮಿಯಾಯಿತೇ? ಅಲ್ಲ, ಬಾಡಿಗೆಯ ಖರ್ಚು ಸೇರಿಸಿ ರೇಟು ಹೇಳಿದರೂ ಹೆಚ್ಚೇ ಆಯ್ತಿದು. ಈ ದನದ ಹೊಟ್ಟೆ ಹೊರೆಯುವುದು ಸಂಸಾರ ಸಾಗಿಸುವದಕ್ಕಿಂತ ಕಷ್ಟವಾಯಿತಲ್ಲ!" ಎಂದು ತಮ್ಮ ಅರೆಕಿವುಡು ಹೆಂಡತಿ ಪಾರ್ವತಿಗೆ ಹೇಳುತ್ತ ಕವಳ ಬಾಯಿಗಿಟ್ಟುಕೊಂಡ ರಾಮ ಹೆಗಡೇರಿಗೆ ಎಂದೋ ಎಲ್ಲೋ ಕೀರ್ಥನೆಯೊಂದರಲ್ಲಿ ಕೇಳಿದ ಕಲಿಗಾಲ ಸಜ್ಜನರಿಗಲ್ಲ ಎಂಬ ಮಾತು ನೆನಪಾಯಿತು. ಇದ್ದೊಬ್ಬ ಮಗ ಗೋಪಾಲನನ್ನು ವಿದ್ಯಾಭ್ಯಾಸ ಮಾಡಿಸಿ ಮಾಡಿಸಿ ಇನ್ನೇನು ಎಲ್ಲ ಮುಗಿಯಿತು, ಮಗ ತಮ್ಮನ್ನು ಪಾಲಿಸುವ ಕಾಲ ಬಂದಿತೆನ್ನುವ ಸಮಯದಲ್ಲೇ ಆತ ನೇಣು ಹಾಕಿಕೊಂಡು ಸಾಯದೆ ಇದ್ದಿದ್ದರೆ ಅರವತ್ತೈದು ವರ್ಷವಾದಮೇಲೆಲ್ಲ ಮನೆ ಯಜಮಾನಿಕೆಯನ್ನು ಹೆಗಲಮೇಲಿಟ್ಟುಕೊಂಡು ಹೆಣಗಾಡುವ ಪರಿಸ್ಥಿತಿ ಅವರಿಗೆ ಬರುತ್ತಿತ್ತೇ? ಏಡ್ಸ್ ರೋಗ ಹತ್ತಿಕೊಂಡಿತ್ತು, ವಿಷಯ ಮನೆಯಲ್ಲಿ, ಊರಲ್ಲಿ ಎಲ್ಲರಿಗು ತಿಳಿದರೆ ಏನು ಮಾಡುವುದೆಂದು ಉಪಾಯ ತೋಚದೆ ಹಾಗೆ ಮಾಡಿಕೊಂಡನೆಂದು ಆಗ ಒಂದಷ್ಟು ದಿನ ಸುದ್ದಿ ಹಬ್ಬಿದ್ದು ನಿಜ. ಹೆಗಡೇರು ಮಾತ್ರ ಹಾಗೆಲ್ಲ ಆಗಿರಲಿಕ್ಕೆ ಶಕ್ಯವೇ ಇಲ್ಲ, ಕಡಿಮೆ ಅಂಕಗಳಿಸಿದ್ದಕ್ಕೋ ಅಥವ ಪ್ರೇಮ ಭಗ್ನಗೊಂಡಿದ್ದಕ್ಕೋ ನಮ್ಮ ಗೋಪಾಲ ಹಾಗೆ ಮಾಡಿಕೊಂಡಿರಬೇಕು, ಎಲ್ಲ ದೈವೇಚ್ಛೆ ಎಂದು ತಮಗೆ ತಾವೆ ಸಮಾಧಾನ ಹೇಳಿಕೊಂಡು ಸುಮ್ಮನಾಗಿದ್ದರು. ಪಾರ್ವತಿ ಕಣ್ಣೀರು ಹಾಕಿಕೊಂಡಿದ್ದಳು. ಹೆಚ್ಚಿಲ್ಲ, ಒಂದೆರಡು ತಿಂಗಳಷ್ಟೆ.
            ಲಾರಿಯಿಂದ ಎರಡು ಸಾವಿರ ಕಟ್ಟು ಹುಲ್ಲನ್ನು ಎಣಿಸಿ ತೋಡುವಷ್ಟರಲ್ಲಾಗಲೇ ಸೂರ್ಯ ಮುಳುಗಿಬಿಟ್ಟಿದ್ದ. ಕತ್ತಲೆಯಲ್ಲಿ ಅವನ್ನು ಪಿಂಡಿಕಟ್ಟಿ ಹೊತ್ತುತರುವ ಸಾಹಸಕ್ಕೆ ಕೈಹಾಕದ ಹೆಗಡೇರು ಬೆಳಗ್ಗೆ ಯಾರಾದರೂ ಆಳಿಗೆ ಹೇಳಿ ಆ ಕೆಲಸವನ್ನು ಮಾಡಿಸಿದರಾಯಿತು ಎಂದುಕೊಂಡು ರಾತ್ರಿ ಎಂಟರ ವಾರ್ತೆ ನೋಡಿ ಮಧ್ಯಾಹ್ನದ ತಂಗಳನ್ನವನ್ನು ಉಂಡು ಮುಗಿಸಿ ಬಾಕಿ ಇದ್ದ ಅಡಿಕೆಯನ್ನು ಆರಿಸಿಟ್ಟು ಒಂಭತ್ತೂವರೆಗೆಲ್ಲ ಹಾಸಿಗೆ ಬಿಚ್ಚಿ ಮಲಗಿಬಿಟ್ಟರು. ಪಾತ್ರೆಗಳನ್ನೆಲ್ಲ ತೊಳೆದು ನಾಳೆಯ ದೋಸೆಗೆ ಹಿಟ್ಟು ನೆನೆಯಲು ಬಿಟ್ಟು ಇನ್ನೊಂದು ಹದಿನೈದು ನಿಮಿಷದಲ್ಲಿ ಪಾರ್ವತಿಯೂ ಅಡ್ಡಾದಳು.
            ಹೆಗಡೇರ ಮನೆಗೆ ಹುಲ್ಲು ಬಂದು ಬಿದ್ದಿದ್ದನ್ನು ಸಂಜೆ ಸೊಸೈಟಿಯಿಂದ ರೇಷನ್ ತೆಗೆದುಕೊಂಡು ಹೋಗುವಾಗಲೆ ನೋಡಿದ್ದ ಮಾರುತಿನಾಯ್ಕನ ತಲೆಯಲ್ಲಿ ಅದಾಗಲೇ ರಾತ್ರಿ ಇಲ್ಲಿಂದ ಒಂದು ನೂರು ಕಟ್ಟನ್ನು ಹಾರಿಸಿಬಿಟ್ಟರೆ ಈ ಮುದುಕನಿಗೆ ಗೊತ್ತಾಗಲಿಕ್ಕಿಲ್ಲ, ಮನೆಯಲ್ಲಿ ಸಾಕಿಕೊಂಡ ಒಂದು ದನಕ್ಕೆ ಇನ್ನೊಂದು ತಿಂಗಳಿಗೆ ಸಾಕಾದೀತು ಎಂಬ ಯೋಚನೆ ಬಂದುಬಿಟ್ಟಿತ್ತು. ಹೊಳೆಯಾಚೆಗಿನ ಹಿತ್ಲಕೇರಿಯಲ್ಲಿ ಅವನ ಮನೆ. ಸಹಾಯಕ್ಕಿರಲಿ ಎಂದು ಆಚೆಮನೆಯ ಫರ್ನಾಂಡೀಸನನ್ನೂ ಜೊತೆ ಕರೆದುಕೊಂಡು ಆತ ಅಶ್ವತ್ಥಕಟ್ಟೆಯ ಪಕ್ಕದಲ್ಲಿ ಬಿದ್ದಿದ್ದ ಹುಲ್ಲುರಾಶಿಯನ್ನು ತಲುಪಿದಾಗ ಸಮಯ ಸರಿಯಾಗಿ ಹನ್ನೊಂದೂವರೆ ಘಂಟೆ. "ನೂರು ಕಟ್ಟು ತೆಗೆದರೆ ಹೆಗಡ್ರಿಗೇನು ಗುತ್ತಾಗುದಿಲ್ಲ. ಕೂಲಿ ದುಡ್ಡು ಕಡಿಮೆ ಕೊಟ್ಟದ್ದಕ್ಕೆ ಸರೀ ಆಗ್ತದೆ" ಎಂದು ಪಿಸುದನಿಯಲ್ಲಿ ಹೇಳಿದ ಮಾರುತಿ ಫರ್ನಾಂಡೀಸನನ್ನು ರಸ್ತೆಯ ಮೇಲೆ ಕಾಯಲು ಬಿಟ್ಟು ಬಿಚ್ಚಿಟ್ಟ ಬಳ್ಳಿಯ ಮೇಲೆ ಹುಲ್ಲುಕಟ್ಟುಗಳನ್ನು ಒಂದೊಂದಾಗಿ ಪೇರಿಸಿ ಪಿಂಡಿ ತಯಾರುಮಾಡತೊಡಗಿದ. ಸಂಜೆ ಭಾಸ್ಕೇರಿಯಲ್ಲಿ ಬಿಟ್ಟುಕೊಂಡು ಬಂದಿದ್ದ ಎಣ್ಣೆಯ ನಶೆ ಫರ್ನಾಂಡೀಸನನ್ನು ಇನ್ನೂ ತೂರಾಡಿಸುತ್ತಲೇ ಇತ್ತು. ಅವನಿಗೆ ಇದ್ದಕ್ಕಿದ್ದಂತೆ ಒಂದು ಬೀಡಿಹಚ್ಚುವ ಬಯಕೆ ಯಾಕೋ ಉತ್ಕಟವಾಯಿತು. ತಡಮಾಡದೇ ಕಿಸೆಯಿಂದ ಬೀಡಿಯೊಂದನ್ನು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿಯೇಬಿಟ್ಟ. ಈಗ ಫರ್ನಾಂಡೀಸನಿಗೆ ಹಳೇ ಕನ್ನಡ ಪಿಕ್ಚರಿನ ಎಂಪಿ ಶಂಕರ್ ನೆನಪಾಗಿದ್ದಾನೆ, "ಅಬ್ಬ! ಎಂತ ಸ್ಟೈಲು ಅವಂದು!" ಎಂದುಕೊಳ್ಳುತ್ತ ತಾನು ಅವನಹಾಗೆ ಉಫ್ ಎಂದು ರೈಲೆಂಜಿನ್ನಿನೋಪಾದಿಯಲ್ಲಿ ಹೊಗೆಯುಗುಳಿದ. ಗೀರಿಬಿಸಾಕಿದ ಬೆಂಕಿಕಡ್ಡಿ ಇತ್ತ ಹುಲ್ಲುಕಟ್ಟೊಂದಕ್ಕೆ ಹೊಗೆ ಹುಟ್ಟಿಸಿದ್ದು ಇಬ್ಬರ ಅರಿವಿಗೆ ಬರುವಷ್ಟರಲ್ಲಿ ಅದು ಬೆಂಕಿಯಾಗಿ ಸಾಕಷ್ಟು ದೊಡ್ಡದು ಆಗಿಯಾಗಿತ್ತು. ಇನ್ನೆಲ್ಲಿಯ ಹುಲ್ಲು?! ಹೊತ್ತಿಕೊಂಡಿದ್ದ ಬೆಂಕಿಯನ್ನಾದರೂ ಆರಿಸೋಣವೆಂದರೆ ಹತ್ತಿರದಲ್ಲೆಲ್ಲು ನೀರೂ ಸಿಗುವಂತಿರಲಿಲ್ಲ. ತಡಮಾಡಿದರೆ ಸಿಕ್ಕಿಬೀಳುವೆವೆಂಬ ಅರಿವು ಬಂದದ್ದೇ ತಡ, ಎದ್ದು ಬಿದ್ದು ಓಡಿದ್ದರು ಇಬ್ಬರೂ. ಅರ್ಧ ದಾರಿ ಕಳೆದಮೇಲೆ ತನಗೆ ಬಂದಿದ್ದ ಸಿಟ್ಟನ್ನೆಲ್ಲ ಹೊರಹಾಕತೊಡಗಿದ ಮಾರುತಿ. "ಅಲ್ಲ ನಿನಗೆ ಅದೇ ಟೈಮಿಗೆ ಬೀಡಿ ಸೇದುವ ಚಟ ಬಂದೋಯ್ತಾ? ಬೋಳಿಮಗನೆ ನಿನ್ ಕರ್ಕಬರುಕಿಂತ ಮದ್ಲೆ ನಂಗ್ ಗುತ್ತಿತ್ತು ಹೀಂಗಾಗ್ತದೆ ಹೇಳಿ. ಪುಕ್ಸಟ್ಟೆ ನಿನಗೆ ಸಿಕ್ತಿದ್ದ ಒಂದ್ ಇಪ್ಪತ್ ಕಟ್ಟನ್ನೂ ತಪ್ಸ್ಕಂಡೆ. ಸತ್ ಹಾಳಾಗೋಗು!". ಫರ್ನಾಂಡೀಸನಿಗೆ ಈಗಲೂ ತಾನು ಅಂಥ ತಪ್ಪು ಮಾಡಿದ್ದೇನು ಎಂದು ತಿಳಿಯುತ್ತಿರಲಿಲ್ಲ.
            ಬೆಂಕಿ ದೊಡ್ಡದಾಗಿ ಹೊಗೆಯ ವಾಸನೆ ಹರಡುತ್ತಿದ್ದಂತೆ ರಾಮ ಹೆಗಡೇರಿಗೆ ಎಚ್ಚರವಾಯಿತು. ತಕ್ಷಣ ಬ್ಯಾಟರಿ ಹಿಡಿದು ಹೊರಗೋಡಿದ ಅವರಿಗೆ ಇದು ಹುಲ್ಲುರಾಶಿಗೆ ಬಿದ್ದ ಬೆಂಕಿಯೇ ಹೌದೆಂದು ಖಾತ್ರಿಯಾಗಿಬಿಟ್ಟಿತ್ತು. ಗಡಿಬಿಡಿಯಲ್ಲಿ ದಣಪೆ ದಾಟುವಾಗ ಕೋಲಿಗೆ ಸಿಕ್ಕಿಕೊಂಡ ಅವರ ಪಂಚೆಯ ತುದಿಯನ್ನು ಓಡಿಬಂದು ಬಿಡಿಸಿಕೊಟ್ಟ ಕೆಳಗಿನಮನೆಯ ಗೋವಿಂದ ನಡೆದ ಘಟನೆಯ ಸ್ಥೂಲ ವಿವರಣೆ ಕೊಟ್ಟ. ಹುಲ್ಲು ಆಗಲೂ ಪೂರ್ತಿಯಾಗಿ ಉರಿದುಹೋಗಿರಲಿಲ್ಲ. ಆದರದು ಹುಲ್ಲು, ನೀರೆರಚಿ ನಂದಿಸಿದರೆ ಒದ್ದೆಯಾಗಿ ಯಾವುದೆ ಉಪಯೋಗಕ್ಕೆ ಬರದೆ ಹಾಳಾಗುವುದು ಖಚಿತ. ಹಾಗಾಗಿ ಎಲ್ಲರೂ ಮೂಕರಾಗಿ ನಿಂತು ಬೆಂಕಿ ಹುಲ್ಲಿನ ಕೊನೆಯ ಕಡ್ಡಿಯನ್ನೂ ಬಿಡದೆ ಕಬಳಿಸಿದ್ದನ್ನು ನೋಡಿದರು. ಹೆಗಡೇರು ಉಳಿದವರು ಸಾಂತ್ವನದಿಂದ, ಸಿಟ್ಟಿನಿಂದ, ಪ್ರಾಮಾಣಿಕವಾಗಿ, ಹಚ್ಚಿಕೊಡಲು, ಮುಂತಾದ ಕಾರಣಗಳಿಗೆ ಹೇಳಿದ ಮಾತುಗಳನ್ನು ಕೇಳಿದರೇ ಹೊರತು ತಾವು ಒಂದೇ ಒಂದು ಮಾತನ್ನೂ ಆಡಲಿಲ್ಲ. ಎಲ್ಲ ಮುಗಿದಮೇಲೆ ಹೆಗಲಮೇಲಿನ ಪಂಚೆಯನ್ನೊಮ್ಮೆ ಕೊಡವಿ ರಪರಪನೆ ಮನೆಯತ್ತ ನಡೆದರು.
            "ಎಲ್ಲ ಆ ಸಾಮದ್ರೋಹಿ ಪರಮೇಶ್ವರ ಹೆಗಡೆಯದೇ ಕೆಲಸ. ಗುತ್ತಿದ್ದು ನನಗೆ. ಸತ್ತವ ಎಂತ ಆಯ್ದು ನೋಡುಲೂ ಬಂದ್ನಿಲ್ಲೆ. ದ್ವೇಷ ತೀರಿಸಿಕೊಳ್ಳೂದಕ್ಕೂ ಒಂದ್ ಹದ ಇರ್ತು. ನಾಳೆ ಬೆಳಿಗ್ಗೆ ಆಗ್ಲಿ ಯಾವುದಕ್ಕೂ!", ಸಿಟ್ಟಿನಲ್ಲಿ ಅಸಂಬದ್ಧ ಪ್ರಶ್ನೆ ಕೇಳಿದ ಪಾರ್ವತಿಗೆ ಎರಡು ತಪರಾಕಿಯನ್ನೂ ಬಿಗಿದಿದ್ದರು ಹೆಗಡೇರು. ಇಡೀ ರಾತ್ರಿ ಒಂದರ ಮೇಲೊಂದು ಕವಳ ಹಾಕಿಕೊಂಡೇ ಕಳೆದಿದ್ದರು. ಸೂರ್ಯ ಮೂಡುವುದಕ್ಕಿಂತ ಮುಂಚೆಯೇ ದಿಕ್ಕಿಗೊಂದೊಂದು ಚೂರಿನಂತಿದ್ದ ತೋಟಗಳನ್ನೆಲ್ಲ ಒಂದು ಸುತ್ತು ಹಾಕಿ ಬಂದಿದ್ದರು. "ಇದಕ್ಕೆ ಚಾ ಹೇಳಿ ಕರಿತ್ವ? ಅಕ್ಕಚ್ಚು ಇದು!" ಎಂದು ಒಂದಿಡೀ ಚೊಂಬು ಚಹವನ್ನು  ಕೊಟ್ಟಿಗೆಯ ಮರಿಗೆಗೆ ಹೊಯ್ದು ಪಾರ್ವತಿಗು ಇಲ್ಲದಂತೆ ಮಾಡಿದರು. ಒಂದಿಷ್ಟು ಹುಲ್ಲು ಸುಟ್ಟುಹೋಗಿದ್ದಕ್ಕೆ ಇಷ್ಟೆಲ್ಲ ಕುಣಿದಾಡುವ ಅವಶ್ಯಕತೆಯಿಲ್ಲವಾಗಿತ್ತು ಎಂದು ಹೇಳುವ ಮನಸ್ಸು ಆಕೆಗಾಗಿತ್ತಾದರೂ ಹೊಡೆತಕ್ಕೆ ಹೆದರಿ ಸುಮ್ಮನಾಗಿದ್ದಳು. ಹೆಗಡೇರಿಗೆ ದಿನಚರಿಯ ಎಲ್ಲ ಕೆಲಸಗಳಲ್ಲೂ ಅಂದೇಕೋ ವಿಶೇಷ ಹುಮ್ಮಸ್ಸು ಬಂದಂತಿತ್ತು. ಎರಡು ಬಾರಿ ಸೊಪ್ಪಿನ ಹೊರೆ ತಂದರು. ಸುದೀರ್ಘವಾಗಿ ದೇವರ ಪೂಜೆಗೈದರು. ಮಧ್ಯಾಹ್ನದ ನಿದ್ರೆಯಲ್ಲೂ ಅವರಿಗೆ ತಾನು ರಾತ್ರಿ ಮಾಡಲಿರುವ ಕೆಲಸದ ಕನಸು ಬಿದ್ದಿತ್ತು.
            ಪರಮೇಶ್ವರ ಹೆಗಡೇರು ಎಂದರೆ ಸಾಮಾನ್ಯರಲ್ಲ. ಪ್ರಸಕ್ತ ಸಾಲಿನ ಪಂಚಾಯ್ತಿ ಛೇರ್ಮನ್ ಅವರು. ಅದೂ ಸುಮ್ಮನೇ ಛೇರ್ಮನ್ ಆದವರೇ? ಹಿಂದಿನ ಸಾಲಿನಲ್ಲಿ ಛೇರ್ಮನ್ ಆಗಿದ್ದ ರಾಮ ಹಗಡೇರನ್ನು ಬಹುಮತದಿಂದ ಸೋಲಿಸಿ ಕುರ್ಚಿಯೇರಿದವರು. ಜನಾನುರಾಗಿ ಹಾಗು ನಿಷ್ಠರಾದ ರಾಮ ಹೆಗಡೇರು ಚುನಾವಣೆಯಲ್ಲಿ ಸೋಲಲು ಇತರೇಪೈಕಿಯವರಿಗೆಲ್ಲ ಪರಮೇಶ್ವರ ಹೆಗಡೇರು ಗೋವಾದಿಂದ ಬಾಟಲಿ ಸಾರಾಯಿ ತಂದು ಹಂಚಿದ್ದೇ ಕಾರಣ ಎಂದು ಒಂದಿಷ್ಟು ಜನ ಮಾತಾಡಿಕೊಂಡಿದ್ದರು. ಈ ಎರಡು ಹೆಗಡೇರ ಮನೆಗಳು ತಲೆತಲಾಂತರಗಳಿಂದ ದ್ವೇಷವನ್ನು ಸಾಕಿ ಬೆಳೆಸಿಕೊಂಡು ಬಂದಿದ್ದವು. ಗೋಪಾಲ ಊರಲ್ಲಿದ್ದು ಪೀಯೂಸಿ ಮಾಡುತ್ತಿದ್ದ ಸಮಯದಲ್ಲಿ ಪರಮೇಶ್ವರ ಹೆಗಡೇರ ಎರಡನೆ ಮಗಳು ಜಾನಕಿಯನ್ನು ಲವ್ ಮಾಡಿ ಮುಂದೆ ಹೇಳದೆ ಕೇಳದೆ ಬೆಂಗಳೂರಿಗೆ ಓಡಿ ಹೋಗಿದ್ದು, ಆಮೇಲೆ ಜಾನಕಿ ಮನೆಮುಂದಿನ ಬಾವಿ ಹಾರಿ ಕಾಲು ಮುರಿದುಕೊಂಡು ಕುಳಿತಿದ್ದು ಈ ದ್ವೇಷ ಇನ್ನಷ್ಟು ಬೆಳೆಯಲು ಕಾರಣವಾಗಿತ್ತು. ಆದ್ದರಿಂದಲೇ ರಾಮ ಹೆಗಡೇರಿಗೆ ಈ ಹುಲ್ಲು ಸುಡುವ ಕಂತ್ರಿ ಕೆಲಸ ಮಾಡಿದ್ದು ಅದೇ ಠಕ್ಕ ಪರಮೇಶ್ವರ ಎಂದು ಥಟ್ಟನೆ ಅನುಮಾನ ಬಂದಿದ್ದು.
            ದಿನವೊಂದು ಸದ್ದಿಲ್ಲದೆ ವೇಷ ಕಳಚಿತು. ರಾತ್ರಿ ಊಟ ಮಾಡುತ್ತಿರುವಾಗ ಪಾರ್ವತಿಯ ಬಳಿ ಕೇಳಿದರು ರಾಮ ಹೆಗಡೇರು, "ಬಚ್ಚಲ ಮಾಡಿನ ದಬ್ಬೆ ಲಡ್ಡಾಯ್ದು ಅಲ್ದಾ?", "ಎಂತದು? ಹಿತ್ತಲಲ್ಲಿ ಹಾವು ಕಂಡಿತಾ?" ಕೇಳಿದಳು ಪಾರ್ವತಿ. "ಥತ್ತೆರಿಕೆ, ನಿನ್ನ ಹತ್ತಿರ ಕೇಳಿದೆನಲ್ಲ, ನನ್ನ ಮೊಕಕ್ಕೆ ನಾನೆ ಸಗಣಿ ಬಡಿದುಕೊಂಡ ಹಾಗೆ!" ಶಪಿಸಿಕೊಂಡ ಹೆಗಡೇರು ಧ್ವನಿ ಎತ್ತರಿಸಿ "ಹನಿ ಉಪ್ಪು ಹಾಕು!" ಎಂದು ಕೂಗಿದರು. ಊಟ ಮುಗಿಸಿ ಕೈತೊಳೆದದ್ದೇ ಬ್ಯಾಟರಿ ಹಿಡಿದು ಬಚ್ಚಲುಮನೆಗೆ ಹೋಗಿ ದಬ್ಬೆಗಳಿಗೆಲ್ಲ ಒರಲೆ ಹಿಡಿದಿರುವುದನ್ನು ಖಾತ್ರಿಪಡಿಸಿಕೊಂಡು "ಇಲ್ಲೆ ಆಚೆ ಹೋಗಿಬರ್ತೆ, ನೀ ಮನಿಕ ದೀಪ ಬಂದ್ ಮಾಡ್ಕಂಡಿ." ಎಂದು ಹಳೇ ರಬ್ಬರು ಚಪ್ಪಲಿ ಮೆಟ್ಟಿ ಬಲಗೈಲಿ ಕತ್ತಿ ಎಡಗೈಲಿ ಬ್ಯಾಟರಿ ಹಿಡಿದು ಹೊರಟುಬಿಟ್ಟರು. ಪಾರ್ವತಿ ಅಡುಗೆಮನೆಯಿಂದ ಹೊರಬಂದು ಏನೆಂದು ಕೇಳುವಷ್ಟರಲ್ಲಿ ಅವರು ಮನೆಯ ಹತ್ತಿರವೆಲ್ಲೂ ಇರಲಿಲ್ಲ. "ಹಡಬೆಗೆ ಹುಟ್ಟಿದವನಿಗೆ ಅವನ ತೋಟದಿಂದಲೆ ನಾಲ್ಕು ಹಸೀ ಅಡಿಕೆಮರ ಕಡಿದುಬಿಸಾಕಿದರೆ ನಾ ಎಂಥವ ಗುತ್ತಾಗ್ತು", ತನಗೆ ತಾನೆ ಹೇಳಿಕೊಳ್ಳುತ್ತ ದೇವಸ್ಥಾನ ಕಳೆದು ತಮ್ಮ ತೋಟದ ಮೂಲಕವಾಗಿ ಪರಮೇಶ್ವರ ಹೆಗಡೆಯ ತೋಟದ ದಣಪೆ ದಾಟುವಾಗ "ಎಂತದೋ ಕಚ್ಚಿದಹಾಗಾಯ್ತಲ್ಲ!"
            ಮಾರನೆ ದಿನ ಬೆಳಿಗ್ಗೆ ಹೊಳೆಬದಿಯಲ್ಲಿ ಶೌಚಕಾರ್ಯವನ್ನು ಮುಗಿಸಿ ಚಡ್ಡಿಯ ಮೇಲೆ ಉಟ್ಟಿದ್ದ ಹರಕು ಪಂಚೆಯನ್ನು ತಲೆಗೆ ಚಂಡಿಕಟ್ಟಿ "ನವಿಲು ಕೊನಿಯುತಿದೆ....." ಎಂದು ರಾಗವಾಗಿ ಎಂಬಂತೆ ಹಾಡಿಕೊಳ್ಳುತ್ತ ಯಾರದಾದರೂ ತೋಟದ ಅಡಿಕೆಯನ್ನು ಹೆಕ್ಕಿಕೊಂಡು ಹೋಗುವ ಆಲೊಚನೆಯೊಡನೆ ಬೇಲಿ ಹಾರಿದ ಗೌಡರಕೇರಿಯ ನಾಗುವಿಗೆ ಅಡಿಕೆಮರವೊಂದಕ್ಕೆ ತಾಡಿಕೊಂಡಂತೆ ಕುಳಿತಿದ್ದ ರಾಮ ಹೆಗಡೇರು ಕಾಣಿಸಿದರು. ಇವರೇಕೆ ಇಲ್ಲಿ ಬಂದರು, ಬಂದವರು ಇಲ್ಲೆ ನಿದ್ರೆ ಮಾಡಿದ್ದೇಕೆ ಎಂದುಕೊಳ್ಳುತ್ತ ಅವರನ್ನು ಸಮೀಪಿಸಿ "ಹ್ವಾಯ್ ವಡಿದೀರು, ಹ್ವಾಯ್..." ಎಂದು ಕರೆದ. ಹೆಗಡೇರು ಹೂಂ ಹಾಂ ಇಲ್ಲದೆ ಬಿದ್ದಿದ್ದಾರೆ! ಇನ್ನೂ ಹತ್ತಿರ ಹೋಗಿ ಕರೆದು ನೋಡಿದ. ಉತ್ತರವಿಲ್ಲ. ಈಗ ನಾಗುವಿಗೆ ಸಂಶಯದ ಜೊತೆ ಹೆದರಿಕೆ ಶುರುವಾಯಿತು. ಒಮ್ಮೆ ಮೆಲುವಾಗಿ ಮುಟ್ಟಿದ. ತುಸು ವಾಲಿದ ಹೆಗಡೇರ ದೇಹ ಹಾಗೇ ಹಸಿಜಡ್ಡಿನ ಮೇಲೆ ವರಗಿಕೊಂಡಿತು. ಹಾಗಾದರೆ ಹೆಗಡೇರು ಸತ್ತದ್ದೇ ಹೌದೆ? ಹೌದು, ಮೂಗಿನಲ್ಲಿ ಗಾಳಿಯ ಸಂಚಾರವೆ ಇಲ್ಲ, ಬಾಯಿ ಅರ್ಧ ತೆರೆದಿದೆ, ಮತ್ತು ಬೆರಳುಗಳು ಸೆಟೆದುಕೊಂಡಿವೆ.